52 ಅಕ್ಷರವಿದ್ದ ಕನ್ನಡ ವರ್ಣಮಾಲೆಯು 49 ಅಕ್ಷರಗಳಾಗಿದ್ದು ಏಕೆ?

           "52 ಅಕ್ಷರ ಇರೋ ಕನ್ನಡನೇ ಕಲಿತ ನಿಮಗೆ, ಇನ್ನು 26 ಅಕ್ಷರ ಇರೋ ಇಂಗ್ಲೀಷ್ ಯಾವ ಲೆಕ್ಕ?" ಇದು ಕನ್ನಡದ ಮೇರು ನಟ ಡಾ.ಪುನೀತ್ ರಾಜಕುಮಾರ್ ರವರು ಅಭಿನಯಿಸಿರುವ "ರಾಜಕುಮಾರ" ಚಿತ್ರದಲ್ಲಿ ಅವರೆ ಹೇಳುವ ಮಾತು.  ಈ ಚಿತ್ರದಲ್ಲಿ ವೃದ್ಧಾಶ್ರಮದಲ್ಲಿದ್ದ ಒಬ್ಬ ಅಜ್ಜಿಗೆ ನಾನು ಇಂಗ್ಲೀಷ್ ಹೇಳಿಕೊಡುತ್ತೇನೆ ಎಂದಾಗ ಅಜ್ಜಿ ನಾನು ಇಂಗ್ಲೀಷ್ ಕಲಿಯಲು ಸಾಧ್ಯವಿಲ್ಲ ಎಂದಾಗ ಪುನೀತ್ ರವರು 52 ಅಕ್ಷರ ಇರೋ ಕನ್ನಡನೇ ಕಲಿತ ನಿಮಗೆ, ಇನ್ನು 26 ಅಕ್ಷರ ಇರೋ ಇಂಗ್ಲೀಷ್ ಯಾವ ಲೆಕ್ಕ? ಎಂದು ಹೇಳುತ್ತಾರೆ.

          ನಾವು ನೀವು ಶಾಲೆಗೆ ಹೋಗುವ ಸಮಯದಲ್ಲಿ ಸುಮಾರು 2000 ನೇ ವರ್ಷಕ್ಕೆ ಕಾಲಿಡುವವರೆಗೂ ನಾವೆಲ್ಲರೂ ನಮ್ಮ ಶಿಕ್ಷಕರಿಂದ ಕಲಿತದ್ದು ಕನ್ನಡ ಭಾಷೆಯಲ್ಲಿ ಒಟ್ಟು 52 ಅಕ್ಷರಗಳಿಗೆ ಎಂದೇ. ಅದು 'ಅ' ಇಂದ 'ಕ್ಷ' ವರೆಗೆ. ಆದರೆ ಪ್ರಸ್ತುತ ಶಾಲೆಗಳಲ್ಲಿ ಕನ್ನಡ ಕಲಿಕೆಯಲ್ಲಿ ಈಗಿನ ಮಕ್ಕಳು ಕಲಿಯುತ್ತಿರುವುದು ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳನ್ನು ಮಾತ್ರ. ಹಾಗಾದರೆ, ನಾವು ನೀವು ಕಲಿತಿರುವ ಆ 52 ಅಕ್ಷರಗಳು 49 ಅಕ್ಷರ ಏಕಾಯಿತು? ಹಾಗಾದರೇ, ಬಿಟ್ಟು ಹೋದ ಆ 3 ಅಕ್ಷರಗಳು ಯಾವುವು? ಏಕೆ ಬಿಟ್ಟು ಹೋಯಿತು? ಹಾಗಿದ್ದರೆ, ಇಲ್ಲಿಯವರೆಗೂ ಕನ್ನಡ ವರ್ಣಮಾಲೆಯಲ್ಲಿ ಆ ಅಕ್ಷರಗಳು ಸ್ಥಾನವನ್ನು ಏಕೆ ಪಡೆದಿದ್ದು? ಎಂಬುದನ್ನು ಈಗ ತಿಳಿಯೋಣ.


            ಕನ್ನಡ ಭಾಷೆಯು ಸರಿಸುಮಾರು 2500 ವರ್ಷಗಳ ಸುದೀರ್ಘ ಇತಿಹಾಸವಿರುವ ಸಂಪದ್ಭರಿತ ಭಾಷೆಯಾಗಿದೆ. ಅಲ್ಲದೇ, ಕನ್ನಡ ಭಾಷೆಯನ್ನು 2008 ರಲ್ಲಿ ಶಾಸ್ತ್ರೀಯ ಭಾಷೆಯಾಗಿ ಭಾರತ ಸರ್ಕಾರವು ಘೋಷಿಸಿತು ಇದು ನಮ್ಮ ಭಾಷೆಗೆ ಸಂದ ಅತ್ಯುನ್ನತ ಗೌರವ. ಇದುವರೆವಿಗೂ 08 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಹೆಮ್ಮೆಯ ಭಾಷೆ ನಮ್ಮ ಕನ್ನಡ.

        ಈ ಭಾಷೆಯಲ್ಲಿ ಇದುವರೆವಿಗೂ ನಾವು 52 ಅಕ್ಷರಗಳಿವೆ ಎಂದು ಕಲಿಯುತ್ತಿದ್ದೆವು. ಆದರೆ, ಈಗ ನಮ್ಮ ಭಾಷೆಯಲ್ಲಿ 49 ಅಕ್ಷರಗಳಿವೆ. ಈ 49 ಅಕ್ಷರಗಳು ಯಾವುವು ಎಂದರೆ?

  ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಅಂ ಅಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ಹೀಗೆ ಕನ್ನಡ ವರ್ಣಮಾಲೆಯು 13 ಸ್ವರಗಳು, 02 ಯೋಗವಾಹಗಳು, 34 ವ್ಯಂಜನಗಳಿಂದ ಒಟ್ಟು 49 ಅಕ್ಷರಗಳನ್ನು ಹೊಂದಿವೆ. ಈ ಹಿಂದೆ ನಮ್ಮ ಭಾಷೆಯಲ್ಲಿ 52 ಅಕ್ಷರಗಳನ್ನು ಕಲಿಸಲಾಗುತ್ತಿತ್ತು. ಹಾಗಾದರೆ, ಇಲ್ಲಿ ಬಿಟ್ಟು ಹೋಗಿರುವ ಆ 3 ಅಕ್ಷರಗಳು ಯಾವುವು? ಎಂದು ನೋಡಿದರೆ ನಮಗೆ ಕಾಣುವುದು ಋ(ಮತ್ತೊಂದು ದೀರ್ಘಸ್ವರ), ಜ್ಞ ಮತ್ತು ಕ್ಷ  ಈ ಮೂರು ಅಕ್ಷರಗಳು ಇಂದು ಕನ್ನಡ ವರ್ಣಮಾಲೆಯಲ್ಲಿ ಸ್ಥಾನವನ್ನು ಪಡೆದಿಲ್ಲ.  


ಈ ಮೇಲಿನ ಚಿತ್ರದಲ್ಲಿ ನೀವು ಈ ಮೂರು ಅಕ್ಷರಗಳನ್ನು ಕಾಣಬಹುದು. ಈ ಮೂರು ಅಕ್ಷರಗಳು ಸಂಸ್ಕೃತ ವರ್ಣಮಾಲೆಯನ್ನು ಅನುಸರಿಸುತ್ತ ವರ್ಣಮಾಲೆಯಲ್ಲಿ ಸ್ಥಾನವನ್ನು ಪಡೆದಿತ್ತು. ಈಗ ಈ ಮೂರು ಅಕ್ಷರಗಳು ಸದ್ಯ ವರ್ಣಮಾಲೆಯಿಂದ ಅಕ್ಷರದ ಸ್ಥಾನಮಾನವನ್ನು ಕಳೆದುಕೊಳ್ಳಲು ಏನು ಕಾರಣ ಎಂಬುದಾಗಿ ನೋಡೋಣ.

01. ಋ (ದೀರ್ಘಸ್ವರ) :

ದೀರ್ಘಸ್ವರವಾದ ಋ ಅಕ್ಷರವು ಇಂದು ವರ್ಣಮಾಲೆಯಲ್ಲಿ ಇಲ್ಲ. ಈಗ ಇರುವುದು ಹ್ರಸ್ವಸ್ವರವಾದ ಋ ಅಕ್ಷರ ಮಾತ್ರ. 

ಈ ಅಕ್ಷರವನ್ನು ಕೈಬಿಡಲು ಕಾರಣವೇನು? ಎಂಬುದಾಗಿ ನೋಡಿದರೆ. ಕನ್ನಡ ಭಾಷೆಯ ಸಾಹಿತ್ಯದಲ್ಲೇ ದೀರ್ಘಸ್ವರವಾದ ಋ ಅಕ್ಷರವನ್ನು ಎಲ್ಲೂ ಬಳಸಿಲ್ಲ ಮತ್ತು ಈ ಸ್ವರವನ್ನು ಉಪಯೋಗಿಸಿಕೊಂಡು ಯಾವ ಪದದ ರಚನೆಯನ್ನು ನಮ್ಮ ಭಾಷೆಯಲ್ಲಿ ಮಾಡಿಲ್ಲ ಹಾಗೂ ಮಾಡುತ್ತಿಲ್ಲ. ಇದು ಬಳಕೆಯಲ್ಲಿಯೇ ಇಲ್ಲದ ಅಕ್ಷರವಾದ್ದರಿಂದ ಇದನ್ನು ವೃಥಾ ವರ್ಣಮಾಲೆಯಲ್ಲಿ ಇಡುವುದು ವ್ಯರ್ಥವೆಂದು ಕಂಡು ಇದನ್ನು ಪ್ರಸ್ತುತ ಕನ್ನಡ ವರ್ಣಮಾಲೆಯಿಂದ ಕೈಬಿಡಲಾಗಿದೆ.

02. ಜ್ಞ ಮತ್ತು ಕ್ಷ  ಅಕ್ಷರಗಳು :

ಈಗ ನಮಗೆ ದೀರ್ಘಸ್ವರವಾದ ಋ ಅಕ್ಷರವನ್ನು ಕೈಬಿಡಲು ಕಾರಣ ತಿಳಿದೆವು. ಈಗ ಉಳಿದ ಎರಡು ಅಕ್ಷರಗಳಾದ ಜ್ಞ ಮತ್ತು ಕ್ಷ ಅಕ್ಷರಗಳನ್ನು ಕೈಬಿಡಲು ಕಾರಣವೇನು ಎಂಬುದನ್ನು ನೋಡೋಣ.

ಜ್ಞ ಮತ್ತು ಕ್ಷ ಇವೆರೆಡೂ ಅಕ್ಷರಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ ಇದು ಒತ್ತರಕ್ಷರಗಳಂತೆ ಕಾಣುತ್ತವೆಯೋ ಹೊರತು ಒಂದು ಪೂರ್ಣ ಅಕ್ಷರದಂತೆ ಕಾಣುತ್ತಿಲ್ಲ ಅಲ್ಲವೇ? ಅಂದರೆ ಇವು ಒತ್ತಕ್ಷರಗಳೆಂದು ಇವು ಸ್ವತಂತ್ರ ಅಕ್ಷರಗಳಲ್ಲವೆಂದು ಕೈಬಿಡಲಾಗಿದೆ. ಅಂದರೆ ಜ್ಞ ಇಲ್ಲಿ ಜ ಅಕ್ಷರಕ್ಕೆ ಞ ವ್ಯಂಜನವು ಒತ್ತಕ್ಷರವಾಗಿ ಬಂದಿದೆ. ಹಾಗೆಯೇ, ಕ್ಷ ಇಲ್ಲಿ ಕ ಅಕ್ಷರಕ್ಕೆ ಷ ವ್ಯಂಜನಾಕ್ಷರವು ಒತ್ತರವಾಗಿ ಬಂದಿದೆ. ಈ ರೀತಿಯಾಗಿ ಇವೆರಡು ಅಕ್ಷರಗಳು ಒತ್ತಕ್ಷರಗಳೆಂದು ಕೈ ಬಿಡಲಾಯಿತು.

ಇಲ್ಲಿಯವರೆಗೂ ನಾವು ಯಾವ ಮೂರು ಅಕ್ಷರಗಳು ಕೈ ಬಿಟ್ಟುಹೋದವು ಎಂದು ತಿಳಿದುಕೊಂಡೆವು? ಹಾಗಾದರೆ ಸುಮಾರು ಶತಮಾನಗಳವರೆಗೆ ಈ ಅಕ್ಷರಗಳು ಕನ್ನಡ ವರ್ಣಮಾಲೆಯಲ್ಲಿ ಸ್ಥಾನ ಏಕೆ ಪಡೆದಿದ್ದವು? ಎಂಬುದನ್ನು ತಿಳಿಯೋಣ.

ದೀರ್ಘಸ್ವರವಾದ ಋ ಅಕ್ಷರವು ಸಂಸ್ಕೃತ ವರ್ಣಮಾಲೆಯನ್ನು ಅನುಸರಿಸಿ ಸ್ಥಾನವನ್ನು ಪಡೆದಿತ್ತು, ಆದರೆ ಅದರ ಬಳಕೆ ಕನ್ನಡದ ಜಾಯಮಾನದಲ್ಲಿ ತೀರ ಇಲ್ಲವೇ ಇಲ್ಲದಿದ್ದರಿಂದ ಈ ಅಕ್ಷರವನ್ನು ವರ್ಣದ ಸ್ಥಾನವನ್ನು ಕಳೆದುಕೊಂಡಿತು.

ಇನ್ನು ಜ್ಞ ಮತ್ತು ಕ್ಷ ಅಕ್ಷರಗಳು ಏಕೆ ಸ್ಥಾನ ಪಡೆದಿತ್ತು ಎಂಬುದನ್ನು ತಿಳಿಯೋಣ.

ಅದಕ್ಕೂ ಮೊದಲು ಞ ಮತ್ತು ಷ ಇವೆರೆಡೂ ಅಕ್ಷರಗಳು ಒತ್ತಕ್ಷರಗಳಾಗಿ ಬಳಕೆಯಾಗಿರುವ ಕೆಲವು ಪದಗಳನ್ನು ಪಟ್ಟಿಮಾಡೋಣ.

ಯಜ್ಞ, ಜ್ಞಾನ,  ವಿಜ್ಞಾನ, ಮನೋಜ್ಞಾನ, ಜ್ಞಾಪಕ ಹೀಗೆ.

ಕ್ಷಣ, ಕ್ಷಣಿಕ, ಅಕ್ಷರ, ವೃಕ್ಷ - ಹೀಗೆ 

ಈ ಮೇಲಿನ ಪದಗಳ ಪಟ್ಟಿಯನ್ನು ಗಮನಿಸಿ ಞ ಮತ್ತು ಷ ಅಕ್ಷರಗಳು ಕ್ರಮವಾಗಿ ಜ ಮತ್ತು ಕ ಅಕ್ಷರಕ್ಕೆ ಮಾತ್ರ ಒತ್ತಕ್ಷರಗಳಾಗಿ ಬಳಕೆಯಾಗಿವೆ. (ನೀವು ಇದನ್ನು ಬಿಟ್ಟು ಬೇರೆ ಅಕ್ಷರಕ್ಕೆ ಒತ್ತಕ್ಷರಗಳಾಗಿ ಬರುತ್ತವೆಯೆ ಪದಗಳ ಪಟ್ಟಿ ಮಾಡಲು ಪ್ರಯತ್ನಿಸಿ) ಅಂದರೆ ಞ ಮತ್ತು ಷ ಇವು ಜ ಮತ್ತು ಕ ಅಕ್ಷರಗಳ ಜೊತೆಗೆ ಮಾತ್ರ ಬಳಕೆಯಾಗುತ್ತಿತ್ತು ಆದ್ದರಿಂದ ಇವೆರಡನ್ನು ಸ್ವತಂತ್ರ ಅಕ್ಷರಗಳಾಗಿ ಕನ್ನಡ ವರ್ಣಮಾಲೆಯಲ್ಲಿ ಸೇರಿಸಲಾಗಿತ್ತು. ಹೀಗೆ ಸೇರಿಸಲು ಮೂಲ ಕಾರಣ ಸಂಸ್ಕೃತ ವರ್ಣಮಾಲೆ. ಸಂಸ್ಕೃತ ಭಾಷೆಯಲ್ಲಿ ಜ್ಞ ಮತ್ತು ಕ್ಷ ಇವು ಸ್ವತಂತ್ರ ವರ್ಣಗಳಂತೆ ವರ್ಣಮಾಲೆಯಲ್ಲಿ ಸ್ಥಾನ ಪಡೆದಿವೆ. ಆದರೆ, ಇಂದು ಕನ್ನಡದಲ್ಲಿ ಇವು ವರ್ಣದ ಸ್ಥಾನವನ್ನು ಪಡೆದಿಲ್ಲ. 

ಸಂಸ್ಕೃತ ಮತ್ತು ಹಿಂದಿ ಭಾಷೆಯನ್ನು ನಾವು ಗಮನಿಸಿದರೆ ಜ್ಞ ಮತ್ತು ಕ್ಷ ಅಕ್ಷರಗಳು ಇಂದಿಗೂ ಸಹ ಆಯಾ ಭಾಷೆಯಲ್ಲಿ ಸ್ವತಂತ್ರ ಅಕ್ಷರದ ಸ್ಥಾನವನ್ನು ಪಡೆದು ಇಂದಿಗೂ ವರ್ಣಮಾಲೆಯಲ್ಲಿವೆ. ಕಾರಣವಿಷ್ಟೇ, ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಜ್ಞ ಮತ್ತು ಕ್ಷ ಅಕ್ಷರಕ್ಕೆ ತಮ್ಮದೇ ಆದ ವಿಶಿಷ್ಟವಾದ ಬೇರೊಂದು ರೂಪವನ್ನು ಪಡೆದಿವೆ. ಅಂದರೆ ಹಿಂದಿಯಲ್ಲಿ ಕ ಅಕ್ಷರದ ರೂಪ, ಷ ಅಕ್ಷರದ ರೂಪ ಮತ್ತು ಕ್ಷ ಅಕ್ಷರದ ರೂಪ ಮೂರು ವಿಭಿನ್ನ ರೀತಿಯಲ್ಲಿವೆ. ಆದರೆ ಕನ್ನಡಲ್ಲಿ ಜ್ಞ ಮತ್ತು ಕ್ಷ ಅಕ್ಷರಕ್ಕೆ ವಿಭಿನ್ನವಾದ ರೂಪ ನೀಡಲಾಗಿಲ್ಲ ಅದನ್ನು ಜ ಮತ್ತು ಞ ಸೇರಿಸಿ ಜ್ಞ ಎಂದು, ಕ ಮತ್ತು ಷ ಸೇರಿಸಿ ಕ್ಷ ಎಂದು ರೂಪ ನೀಡಿ ಕನ್ನಡ ವರ್ಣಮಾಲೆಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ, ಕಾಲ ಕ್ರಮೇಣ ಕನ್ನಡ ವರ್ಣಮಾಲೆಯಲ್ಲಿ ಅಕ್ಷರಗಳ ಸಂಖ್ಯೆ ಹೆಚ್ಚಿದ್ದ ಕಾರಣ ಕಲಿಯುವಿಕೆಯ ಮೇಲು ಪರಿಣಾಮ ಬೀರ ಬಹುದೆಂದು ಮತ್ತು ಅವು ಒತ್ತಕ್ಷರಗಳ ರೂಪವೆಂದು ಕಾಣುತ್ತಿದ್ದ ಕಾರಣ ಜ್ಞ ಮತ್ತು ಕ್ಷ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ಕೈಬಿಡಲಾಯಿತು.

ಹೀಗೆ 52 ಅಕ್ಷರಗಳಿದ್ದ ಕನ್ನಡ ವರ್ಣಮಾಲೆಯು ಇಂದು 49 ಅಕ್ಷರಗಳಿಂದ ಕೂಡಿದೆ.

ಇದಾಗಿತ್ತು ಇದುವರೆಗೆ ನಾವು ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದ ವಿಚಾರ. ಇದೇ ರೀತಿ ಕನ್ನಡ ಭಾಷೆಗೆ ಸಂಬಂದಿಸಿದಂತೆ ಬೇರೆ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ ಮಾಹಿತಿ ನೀಡಲು ಪ್ರಯತ್ನಿಸುತ್ತೇನೆ.

Comments

  1. ಉತ್ತಮ ಮಾಹಿತಿ ನೀಡಿದ್ದೀರಿ

    ReplyDelete

Post a Comment

We reply u shortly .. pls wait

Popular posts from this blog

ಸೇತುಬಂಧ ಸಾಹಿತ್ಯ 2024-25

ವಿದ್ಯಾಗಮ ತರಗತಿವಾರು ಅಕ್ಟೋಬರ್ ೨೦೨೦ ಮಾಹೆಯ ಪಠ್ಯ ಕಾರ್ಯಸೂಚಿಗಳು.